“ಈಶ ಎಂದರೆ ಸೃಷ್ಟಿಯ ಮೂಲ ಎಂದು ಅರ್ಥ.
ಕ್ರಿಯ ಎಂದರೆ ಸೃಷ್ಟಿಯ ಮೂಲದೆಡೆಗೆ ಸಾಗುವ ಕಾರ್ಯ. ಈಶ ಕ್ರಿಯ
ಎಂಬುದು ಅಸತ್ಯದಿಂದ ಸತ್ಯದೆಡೆಗೆ ಸಾಗಲು ನೆರವಾಗುವ ಸರಳ ಹಾಗೂ ಶಕ್ತಿಯುತವಾದ ಒಂದು ಸಾಧನವಾಗಿದೆ.”

- ಸದ್ಗುರು

ಸುಖ-ಸಂತೋಷಕ್ಕೆ ತಂತ್ರಜ್ಞಾನಗಳು

ಪ್ರಶ್ನೋತ್ತರಗಳು:

 • ಈ ಧ್ಯಾನದಿಂದ ಸಿಗುವ ಲಾಭಗಳೇನು?
 • ಈ ಧ್ಯಾನಕ್ರಮದಿಂದ ನಿರ್ದಿಷ್ಟವಾಗಿ ಏನು ಆಗುತ್ತದೆ?
 • ಈಶ ಕ್ರಿಯ ಮಾಡಲು, ಕನಿಷ್ಟ ಎಷ್ಟು ವಯಸ್ಸು ಆಗಿರಬೇಕು?
 • ಇದನ್ನು ಅಂತರ್ಜಾಲದಲ್ಲಿ(ಇಂಟರ್ನೆಟ್)ದಲ್ಲಿ ಏಕೆ ಕಲಿಸಲಾಗುತ್ತದೆ?
 • ಉಸಿರಿನ ಮಹತ್ವವೇನು? ಉಸಿರಿನ ನಿಯಂತ್ರಣದಿಂದ ಆರೋಗ್ಯ ಸುಧಾರಣೆಯನ್ನು ಹೊರತುಪಡಿಸಿ ಇತರ ಲಾಭಗಳೇನಾದರೂ ಇವೆಯೇ?
 • ನಾನೇಕೆ ಮುಖವನ್ನು ಸ್ವಲ್ಪ ಮೇಲೆತ್ತಬೇಕು?
 • “ಆ” ಶಬ್ದವನ್ನು ಉಚ್ಛರಿಸುವುದರಿಂದ ನನ್ನ ಮೇಲಾಗುವ ಪರಿಣಾಮಗಳೇನು?
 • ಖಾಲಿಹೊಟ್ಟೆಯಲ್ಲಿ ಇರಬೇಕಾದುದು ಈಶಕ್ರಿಯಗೆ ಅನ್ವಯಿಸುತ್ತದೆಯೇ? ಆಹಾರ ಸೇವಿಸಿದ ನಂತರ ಮತ್ತು ಈ ಕ್ರಿಯೆಯ ನಡುವೆ ಎಷ್ಟು ಸಮಯ ಕೊಡಬೇಕು?
 • ಈ ಧ್ಯಾನವನ್ನು ನಿಗದಿತ ದಿನಗಳವರೆಗೆ ಮಾಡಿದರೆ ಸಾಕೇ ಅಥವ ಜೀವನ ಪರ್ಯಂತ ಮಾಡಬೇಕೇ?
 • ನಾನು ಈಗಾಗಲೇ ’ಇನ್ನರ್ ಎಂಜಿನೀರಿಂಗ್’ ಕಾರ್ಯಕ್ರಮ ಮಾಡಿದ್ದು ದಿನವೂ ಯೋಗ-ಸಾಧನೆ ಮಾಡುತ್ತೇನೆ. ಶಾಂಭವಿ ಮಹಾಮುದ್ರಾ ಜೊತೆಗೆ ಈಶ ಕ್ರಿಯ ಮಾಡುವ ಅಗತ್ಯ ಇದೆಯೇ? ಎರಡನ್ನೂ ಮಾಡಿದರೆ ಲಾಭವಿದೆಯೇ?
 • ’ಆ’ ಧ್ವನಿ ಮಾಡಿದನಂತರ ನಾನು ಸ್ಪಂದನಶೀಲ ಹಾಗೂ ಸುಖಿಯಾಗಿರುವಂತೆ ಅನುಭವ ಆಗುವುದು. ಈ ಮಂತ್ರವನ್ನು ಏಳುಬಾರಿಗೂ ಹೆಚ್ಚಿಗೆ ಮಾಡಬಹುದೇ? ಅಥವ ಇದನ್ನು ಬೇರೊಂದು ಧ್ಯಾನವಾಗಿ ಮಾಡಬಹುದೇ?
 • ಪ್ರತಿಯೊಬ್ಬರೂ ಈಶ ಕ್ರಿಯ ಮಾಡಬಹುದೇ? ಈಶ ಕ್ರಿಯ ಮಾಡಲಾಗದಂತಹ ಕಾಯಿಲೆಗಳಿವೆಯೇ? ನನಗೆ ಸರ್ವಿಕಲ್ ಸ್ಪಾಂಡಿಲೈಟಿಸ್ ಇದೆ; ನಾನು ಈಶ ಕ್ರಿಯ ಮಾಡಬಹುದೇ?
 • ನಾನು ಈಶ ಕ್ರಿಯವನ್ನು ಕುಟುಂಬದವರಿಗೆ, ಸ್ನೇಹಿತರಿಗೆ ಹೇಳಿಕೊಡಬಹುದೇ? ಅಥವ ಅವರೂ ವಿಡಿಯೋವನ್ನು ನೋಡಿಯೇ ಕಲಿಯಬೇಕೇ?
 • ನಾನು ’ಆ’ ಧ್ವನಿ ಉಚ್ಚರಿಸುವಾಗ ಹೃದಯದಲ್ಲಿ ಮತ್ತು ಕಂಠದಲ್ಲಿ ಕಂಪನ ಇರುವುದು ಗೊತ್ತಾಗುವುದು. ಆದರೆ ಮಣಿಪೂರಕ(ಹೊಟ್ಟೆಯ ಭಾಗ)ದಲ್ಲಿನ ಕಂಪನ ಗೊತ್ತಾಗುವುದಿಲ್ಲ. ನಾನೆಲ್ಲಿ ತಪ್ಪುತ್ತಿದ್ದೇನೆ?
 • ನನಗೆ ಪದ್ಮಾಸನದಲ್ಲಿ ಕೂರಲು ಸಾಧ್ಯವಾಗದು. ಕುರ್ಚಿಯಲ್ಲಿ ಬೆನ್ನು ನೆಟ್ಟಗಿರಿಸಿ ಕುಳಿತು ಈಶ ಕ್ರಿಯ ಮಾಡಬಹುದೇ?
 • ಈ ಧ್ಯಾನವನ್ನು ಎಲ್ಲಿ ಮಾಡಬೇಕು? ನಾನಿರುವ ಸ್ಥಳದಲ್ಲಿ ಬಹಳ ಗದ್ದಲವಿರುತ್ತದೆ. ಧ್ಯಾನಕ್ಕಾಗಿ ಪ್ರತ್ಯೇಕ ಸ್ಥಳ ಬೇಕೇ?
 • ನಾನು ’ಆನ್‌ಲೈನ್’ನಲ್ಲಿ ಈಶ ಕ್ರಿಯ ಮಾಡಲು ಕಲಿತು ಬಿಡದೆ ಅಭ್ಯಾಸ ಮಾಡುತ್ತಿದ್ದೆ. ಕಾರಣಾಂತರದಿಂದ ಅಭ್ಯಾಸ ಬಿಟ್ಟುಹೋಗಿದೆ. ಪುನಃ ಕ್ರಿಯ ಆರಂಭಿಸಬೇಕೆನಿಸಿದೆ. ಮತ್ತೆ ’ಆನ್‌ಲೈನ್’ ನಲ್ಲಿ ಕಲಿಯಬೇಕೇ ಅಥವ ಹಿಂದೆ ಕಲಿತದ್ದನ್ನೇ ಮುಂದುವರಿಸಿ ಮಾಡಬಹುದೇ?
 • ಈಶ ಕ್ರಿಯ ಮಾಡಲು ಸೂಕ್ತ ಸಮಯ ಯಾವುದು?
 • ದಿನದಲ್ಲಿ ಎಷ್ಟು ಬಾರಿ ಈಶ ಕ್ರಿಯ ಮಾಡಬಹುದು?
 • ನಲವತ್ತೆಂಟು ದಿನಗಳ ಅವಧಿಯ ಅಗತ್ಯವೇನು?

ನಿಮ್ಮ ಪ್ರಶ್ನೆಗಳನ್ನು ಕಳುಹಿಸಿ

 • ಸದ್ಗುರು: ಮೊದಲನೆಯದಾಗಿ, ಧ್ಯಾನದ ಅಗತ್ಯವಾದರೂ ಎಲ್ಲಿದೆ? ಜೀವನ ಪ್ರಕ್ರಿಯೆಯ ಪ್ರಾರಂಭವು ನಿಮ್ಮ ಪ್ರಜ್ಞಾಪೂರ್ವಕ ಆಯ್ಕೆಯಾಗಿರಲಿಲ್ಲ, ಅದು ನಿಮಗೆ “ಸಂಭವಿಸಿತು” ಅಷ್ಟೆ.ನೀವು ಹುಟ್ಟಿದಾಗ ನಿಮ್ಮ ಶರೀರವು ಅತಿಚಿಕ್ಕದಾಗಿದ್ದಿತು, ಇದೀಗ ದೊಡ್ಡದಾಗಿ ಬೆಳೆದಿದೆ.ಆದ್ದರಿಂದ, ಸ್ಪಷ್ಟವಾಗಿ, ಶರೀರವೆಂಬುದು ನೀವು ಸಂಗ್ರಹಿಸಿದ ವಸ್ತುವಾಗಿದೆ.ಅದೊಂದು ಸಂಗ್ರಹ.ನೀವು “ನನ್ನ ಶರೀರ” ಎಂದು ಯಾವುದನ್ನು ಕರೆಯುತ್ತೀರೋ ಅದು ಆಹಾರದ ಸಂಗ್ರಹವಾಗಿದೆ.ಅದೇ ರೀತಿ, “ನನ್ನ ಮನಸ್ಸು” ಎಂದು ಯಾವುದನ್ನು ಕರೆಯುತ್ತೀರೋ ಅದು ಒಂದಷ್ಟು ವಿಷಯಗಳ ಸಂಗ್ರಹವಾಗಿದೆ.

  ನೀವು, ಸಂಗ್ರಹಿಸಿದುದು ’ನಿಮ್ಮ’ದಾಗಬಹುದು, ಆದರೆ ಅದು ಎಂದಿಗೂ ’ನೀವು’ ಆಗುವುದಿಲ್ಲ.ನೀವು ಸಂಗ್ರಹಿಸಿದುದು ಎಂಬ ಅಂಶವೇ, ಅದನ್ನು ನೀವು ಹೊರಗಿನಿಂದ ತಂದಿದ್ದು ಎಂಬುದನ್ನು ಸೂಚಿಸುತ್ತದೆ.ಈಗ ನೀವು ಸುಮಾರು ೭೦ ಕೆ.ಜಿ.ಶರೀರವನ್ನು ಸಂಗ್ರಹಿಸಿರಬಹುದು, ಆದರೆ ಅದನ್ನು ೬೦ ಕೆಜಿಗೆ ಇಳಿಸುವ ತೀರ್ಮಾನವನ್ನು ನೀವು ತೆಗೆದುಕೊಳ್ಳಬಹುದು.ಕಳೆದುಕೊಂಡ ೧೦ ಕೆ.ಜಿ.ಯ ಬಗ್ಗೆ ನೀವು ಎಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ, ಏಕೆಂದರೆ, ಅದೊಂದು ಸಂಗ್ರಹವಾಗಿದೆ.ಒಮ್ಮೆ ಅದನ್ನು ನೀವು ಕಳೆದುಕೊಂಡರೆ, ಅದು ಹೋಯಿತು ಅಷ್ಟೆ. ಅದೇ ರೀತಿ, ನಿಮ್ಮ ಮನಸ್ಸು ಎಂಬುದು ಒಂದಷ್ಟು ವಿಷಯಗಳ ಸಂಗ್ರಹವಾಗಿದೆ.

  ನೀವು ನಿಮ್ಮ ಅನುಭವದ ಜೊತೆ ನಿಮ್ಮನ್ನು ಗುರುತಿಸಿಕೊಂಡಾಕ್ಷಣ, ನೀವಲ್ಲದ ವಸ್ತುವಿನೊಡನೆ ನಿಮ್ಮನ್ನು ನೀವು ಗುರುತಿಸಿಕೊಂಡಾಕ್ಷಣ, ನಿಮ್ಮ ಗ್ರಹಿಕೆಯು ವಿಕೃತಗೊಳ್ಳುವುದು.ನೀವು ಹೊರಗಿನಿಂದ ಸಂಗ್ರಹಿಸಿದ ಈ ಶರೀರವನ್ನು “ನಾನು” ಎಂದು ತಿಳಿದಾಕ್ಷಣ, ಹೊರಗಿನಿಂದ ಸಂಗ್ರಹಿಸಿದ ವಿಷಯವನ್ನು “ನಾನು” ಎಂದು ಭಾವಿಸಿದ ಕ್ಷಣವೇ, ಜೀವನವನ್ನು ಅದು ಹೇಗಿದೆಯೋ ಹಾಗೆ ಗ್ರಹಿಸುವ ಸಾಮರ್ಥ್ಯವನ್ನು ಕಳೆದುಕೊಂಡುಬಿಡುತ್ತೀರಿ.ನೀವು ಕೇವಲ ಬದುಕಿರಲು ಬೇಕಾದಂತೆ ಮಾತ್ರ ಜೀವನವನ್ನು ಗ್ರಹಿಸುವಿರಿ, ಅದು ಇರುವಂತೆ ಗ್ರಹಿಸಲಾರಿರಿ.

  ಮಾನವರಾಗಿ ಹುಟ್ಟಿದ ಮೇಲೆ, ಬದುಕಿರುವುದು ಅತ್ಯಂತ ಮುಖ್ಯವಾದರೂ, ಅದು ಸಾಕಾಗುವುದಿಲ್ಲ.ನೀವು ಇತರ ಯಾವುದಾದರೂ ಪ್ರಾಣಿಯಾಗಿ ಈ ಭೂಮಿಯ ಮೇಲೆ ಹುಟ್ಟಿದ್ದರೆ, ಹೊಟ್ಟೆ ತುಂಬಿದಾಕ್ಷಣ ನೀವು ತೃಪ್ತರಾಗಿಬಿಡುತ್ತಿದ್ದೀರಿ.ಆದರೆ, ಮನುಷ್ಯನಾಗಿ ಹುಟ್ಟಿದ ಮೇಲೆ, ಅವನ ಜೀವನವು ಬರೀ ಹೊಟ್ಟೆಪಾಡಿನಲ್ಲೇ ಕೊನೆಗೊಳ್ಳುವುದಿಲ್ಲ. ನಿಜವಾಗಿ, ಮನುಷ್ಯ ಜೀವನವು ಅವರ ಶಾರೀರಿಕ ಅಗತ್ಯಗಳು ಪೂರೈಸಿದ ಮೇಲೆಯೇ ಪ್ರಾರಂಭವಾಗುವುದು.

  ಧ್ಯಾನವು, ನೀವು ಎಂಬುದನ್ನು ನಿಮ್ಮದು ಎಂಬುದರಿಂದ ಬೇರ್ಪಡಿಸಿ, ಒಂದು ಆಂತರಿಕ ಸ್ಥಿತಿಯನ್ನು ಅನುಭವಕ್ಕೆ ತಂದುಕೊಡುತ್ತದೆ. ನೀವು ಮತ್ತು ನೀವು ಮಾಡಿಕೊಂಡ ಸಂಗ್ರಹಗಳ ಮಧ್ಯೆ ಆಂತರಿಕವಾಗಿ ಸ್ವಲ್ಪ ಅಂತರವುಂಟಾಗುತ್ತದೆ.ಈಗಿನಮಟ್ಟಿಗೆ ಇದನ್ನೇ ನಾವು ಧ್ಯಾನ ಎಂದುಕೊಳ್ಳೋಣ.

  ಇದನ್ನು ಮಾಡುವುದರಿಂದ ಪ್ರಯೋಜನವೇನು?ಅದು ನಿಮ್ಮ ಗ್ರಹಿಕೆಯನ್ನು ಸ್ಪಷ್ಟಪಡಿಸುತ್ತದೆ.ನೀವು ಜೀವನವನ್ನು, ಯಾವುದೇ ವಿಕೃತಿಗಳಿಲ್ಲದೇ, ಅದು ಇರುವಂತೆಯೇ ನೋಡುವಿರಿ.ಈ ಬದುಕಿನಲ್ಲಿ ಸಾಗಿಹೋಗುವ ನಿಮ್ಮ ಸಾಮರ್ಥ್ಯವು ನೀವು ಈ ಬದುಕನ್ನು ಎಷ್ಟು ಸ್ಪಷ್ಟವಾಗಿ ನೋಡುತ್ತೀರಿ ಎಂಬುದನ್ನು ಅವಲಂಬಿಸಿದೆ. ನನ್ನ ದೃಷ್ಟಿಯಲ್ಲಿ ಸ್ಪಷ್ಟತೆಯಿಲ್ಲದೇ ಕೇವಲ ಆತ್ಮವಿಶ್ವಾಸದೊಂದಿಗೆ ಈ ಪ್ರಪಂಚದಲ್ಲಿ ಸಾಗಲು ಯತ್ನಿಸಿದರೆ, ನಾನೊಬ್ಬ ಮೂರ್ಖನೇ ಸರಿ. ಎಲ್ಲಿ ಜನರಿಗೆ ತಿಳುವಳಿಕೆ ಇರುವುದಿಲ್ಲವೋ ಅಲ್ಲೆಲ್ಲಾ ಜನರು ವಿಶ್ವಾಸವನ್ನು ಹೆಚ್ಚಿಸುವ ಮೂಲಕ ಆ ಕೊರತೆಯನ್ನು ತುಂಬುವ ಪ್ರಯತ್ನವನ್ನು ಮಾಡುವರು.ಸ್ಪಷ್ಟತೆಯ ಕೊರತೆಯನ್ನು ಜನರು ಪರ್ಯಾಯ ಕ್ರಮಗಳಿಂದ ಮರೆಮಾಚಲು ಯತ್ನಿಸುವರು.ಆದರೆ, ಸ್ಪಷ್ಟತೆಗೆ ಯಾವುದೇ ಪರ್ಯಾಯವಿಲ್ಲ.

  ಒಮ್ಮೆ ನೀವು ಇದನ್ನು ಅರ್ಥಮಾಡಿಕೊಂಡರೆ, ಸಹಜವಾಗಿ ಧ್ಯಾನಸ್ಥರಾಗುವಿರಿ; ಎಲ್ಲ ಗೊಂದಲಗಳನ್ನು ನಿವಾರಿಸಿಕೊಂಡು ಜೀವನವು ಹೇಗೆ ಇರುವುದೋ ಹಾಗೆಯೇ ನೋಡಲು ಬಯಸುವಿರಿ, ಏಕೆಂದರೆ, ನೀವು ಹೆಚ್ಚಿನ ಘರ್ಷಣೆಯಿಲ್ಲದೇ, ಎಲ್ಲೂ ಎಡವದೆಯೇ ಜೀವನದಲ್ಲಿ ಸಾಗಿಹೋಗಲು ಬಯಸುವಿರಿ.

 • ಸದ್ಗುರು: ಈ ಕ್ರಿಯೆಯು ನೀವು ಹಾಗೂ ನಿಮ್ಮ ಶರೀರ, ನೀವು ಹಾಗೂ ನಿಮ್ಮ ಮನಸ್ಸುಗಳ ನಡುವೆ ಅಂತರವನ್ನು ನಿರ್ಮಿಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ದುಃಖವೊದಗಿದರೂ, ಅದು, ನೀವು ನಿಮ್ಮ ಈ ಸೀಮಿತ ಆಯಾಮಗಳೊಂದಿಗೆ ಗುರುತಿಸಿಕೊಳ್ಳುವುದರಿಂದಲೇ ಉಂಟಾಗಿವೆ.

  ಆದ್ದರಿಂದ, ನೀವು ಮತ್ತು ನಿಮ್ಮ ಮನಸ್ಸಿನ ನಡುವೆ ಅಂತರವೇರ್ಪಡಿಸಿ, ಒಂದು ಅವಕಾಶವನ್ನು ಸೃಷ್ಟಿಸುವುದೇ ಧ್ಯಾನದ ಸಾರವಾಗಿದೆ.ನೀವು ಅನುಭವಿಸುವ ಎಲ್ಲಾ ದುಃಖಗಳೂ ಮನಸ್ಸಿನಲ್ಲಿ ತಯಾರಾಗುತ್ತವೆ. ನೀವು ನಿಮ್ಮ ಮನಸ್ಸನ್ನು ಸ್ವಲ್ಪ ದೂರದಲ್ಲಿಟ್ಟರೆ, ನಿಮ್ಮಲ್ಲಿ ದುಃಖವಿರುವುದಕ್ಕೆ ಸಾಧ್ಯವಿದೆಯೇ? ಇದೇ ದುಃಖದ ಕೊನೆಯಾಗಿದೆ.

  ಈಗ ನೀವು ಧ್ಯಾನ ಮಾಡುವಾಗ, ನೀವು ಹಾಗೂ ನಿಮ್ಮ ಮನಸ್ಸಿನ ನಡುವೆ ಅಂತರ ಏರ್ಪಟ್ಟು, ನಿಮ್ಮಲ್ಲಿ ಶಾಂತಿ ಉಂಟಾಗುತ್ತದೆ. ಈಗ ಸಮಸ್ಯೆಯೇನೆಂದರೆ, ನೀವು ನಿಮ್ಮ ಕಣ್ಣುಗಳನ್ನು ತೆರೆದ ಕೂಡಲೇ, ಪುನಃ ನಿಮ್ಮ ಮನಸ್ಸಿನೊಂದಿಗೆ ಸಿಲುಕಿಕೊಳ್ಳುತ್ತೀರಿ.

  ನೀವು ಪ್ರತಿದಿನ ಧ್ಯಾನ ಮಾಡುತ್ತಿದ್ದರೆ, ಕೊನೆಗೊಂದು ದಿನ ನಿಮ್ಮ ಕಣ್ಣುಗಳನ್ನು ತೆರೆದಾಗ,ನಿಮ್ಮ ಮನಸ್ಸು ನಿಮ್ಮಿಂದ ಪ್ರತ್ಯೇಕವಾಗಿ ಒಂದು ಕಡೆ ಇರುವುದು ಅನುಭವಕ್ಕೆ ಬರುತ್ತದೆ. ಅಂದರೆ ನೀವು ಇಲ್ಲಿದ್ದರೆ, ನಿಮ್ಮ ಮನಸ್ಸು’ಅಲ್ಲಿ’, ಸ್ವಲ್ಪ ದೂರದಲ್ಲಿ ಇರುತ್ತದೆ. ಇದೇ ದುಃಖದ ಕೊನೆನೀವು ನಿಮ್ಮ ಶರೀರ ಮತ್ತು ಮನಸ್ಸಿನೊಂದಿಗೆ ಗುರುತಿಸಿಕೊಳ್ಳದಿದ್ದಲ್ಲಿ, ಆಗ ನೀವು ನಿಮ್ಮೊಳಗಿರುವ ಸೃಷ್ಟಿಯ ಮೂಲದೊಂದಿಗೆ ಸಂಪರ್ಕದಲ್ಲಿರುವಿರಿ. ಒಮ್ಮೆ ಈರೀತಿ ಆಯಿತೆಂದರೆ, ಅನುಗ್ರಹವು ಉಂಟಾಗುತ್ತದೆ.

  ಅಂದರೆ ನಿಮ್ಮ ಕರ್ಮದ ಮೂಟೆ, ನಿಮ್ಮ ಭೂತಕಾಲದ ಸಂಗ್ರಹ ಅಥವಾ ಸುಪ್ತ ಮನಸ್ಸನ್ನು ಬದಿಗಿಡುವುದರಿಂದ, ಅವುಗಳು ನಿಮ್ಮ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ.ಭೂತಕಾಲವು ನಿಮ್ಮ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಾದ್ದರಿಂದ, ಜೀವನವು ಶಕ್ತಿಯುತವಾದ ಸಾಧ್ಯತೆಯಾಗಿ ಮಾರ್ಪಡುತ್ತದೆ.

  ನಿಮ್ಮ ಇವತ್ತಿನ ಜೀವನದ ಮೇಲೆ ಭೂತಕಾಲವು ಯಾವುದೇ ಪರಿಣಾಮ ಬೀರದಿರುವುದರಿಂದ, ನಿಮ್ಮ ಜೀವನದ ಪ್ರತಿಯೊಂದು ಉಸಿರೂ ಒಂದು ಅಪರಿಮಿತ ಸಾಧ್ಯತೆಯಾಗುತ್ತದೆ.ನೀವು ಒಂದೆಡೆ ಕುಳಿತರೆ ಸಾಕು, ನೀವೊಂದು ಪೂರ್ಣ ಜೀವನವಾಗುವಿರಿ. ಜೀವನವು ಹೆಚ್ಚಿನ ಶ್ರಮವಿಲ್ಲದೇ ಸಾಗುವುದು.

 • 12 ವರ್ಷದ ಮೇಲಿನ ಯಾರು ಬೇಕಾದರೂ ಈಶ ಕ್ರಿಯ ಮಾಡಬಹುದು.

 • ಸದ್ಗುರು: ಕೆಲವು ವರ್ಷಗಳ ಹಿಂದೆ, ನಾನು ಸುಮ್ಮನೆ ಕುಳಿತಿರುವಂತೆಯೇ, ಏನನ್ನೂ ಮಾಡದೆಯೇ, ಯಾವ ಕಾರಣವೂ ಇಲ್ಲದೇ ಆನಂದದಿಂದ ತುಂಬಿ ತುಳುಕುತ್ತಿದ್ದೆ. ಆಗ ನನ್ನ ಯೋಚನೆ ಹೀಗಿತ್ತು, ಇದೇನು ಮಹಾ ಕೆಲಸ, ಸುಮ್ಮನೆ ಕುಳಿತಿರುವಂತೆಯೇ ನಾನು ಆನಂದದಿಂದ ತುಂಬಿಹೋಗಿದ್ದೇನೆ. ಇಡೀ ಜಗತ್ತನ್ನೇ ಆನಂದದಿಂದ ತುಂಬಿರುವಂತೆ ಮಾಡುತ್ತೇನೆ” ಎಂದುಕೊಂಡೆ. ಅಂದಿನಿಂದ ಇಂದಿಗೆ ಸುಮಾರು ಮೂವತ್ತು ವರ್ಷಗಳಾದುವು, ನನ್ನ ಗಡ್ಡ ಬಿಳಿಯಾಯಿತು, ಆದರೆ ಜನರು ತಮ್ಮ ದುಃಖವನ್ನು ಬಿಡಲು ತಯಾರಿಲ್ಲ.ನಾವು ಲಕ್ಷಾಂತರ ಜನರನ್ನು ತಲುಪಿದ್ದೇವೆ, ಆದರೂ, ಅದು ಇಡೀ ಪ್ರಪಂಚವಲ್ಲ. ನನ್ನ ವಿಚಾರದಲ್ಲಿ ಪ್ರಪಂಚವೆಂದರೆ ಏಳು ನೂರು ಕೋಟಿ ಜನ!

  ಇದೀಗ, ಸಮಾಜಗಳು ದಿನಗಳೆದಂತೆ ವಿಲಕ್ಷಣಗೊಳ್ಳುತ್ತಿವೆ, ಏಕೆಂದರೆ, ಭೌತಿಕವಾಗಿ ಮಾಡಬಹುದಾದ ಎಲ್ಲವನ್ನೂ ಮಾಡಿ ಮುಗಿಸಲಾಗಿದೆ.ಮುಂದೇನು ಮಾಡಬೇಕು ಎಂಬುದು ಜನರಿಗೆ ತಿಳಿಯದಾಗಿದೆ.ಇನ್ನು ನೀವು ಮಾಡಬಹುದಾದುದೆಂದರೆ, ಕೂದಲನ್ನು ತರಹೇವಾರಿಯಾಗಿ ಕತ್ತರಿಸಿಕೊಳ್ಳುವುದು ಅಥವಾ ತಲೆಯಿಂದ ಕಾಲಿನವರೆಗೂ ಹಚ್ಚೆಹಾಕಿಸಿಕೊಳ್ಳುವುದು ಅಷ್ಟೆ. ಹೊಸದಾಗಿ ನೀವು ಇನ್ನೇನು ಮಾಡಬಹುದು?! ಜನರು ಹೊಸದನ್ನು ಮಾಡುತ್ತೇವೆಂಬ ಭ್ರಮೆಯಲ್ಲಿ, ಹೆಚ್ಚು ಹೆಚ್ಚು ಜೀವನ ವಿರೋಧಿ ಕೃತ್ಯಗಳನ್ನು ಮಾಡಲು ಪ್ರಾರಂಭಿಸುತ್ತಾರೆ.

  ಆದ್ದರಿಂದ, ಸಮಾಜವು ಆಧ್ಯಾತ್ಮಿಕ ಪ್ರಕ್ರಿಯೆಗೆ ಅತಿಯಾಗಿಯೇ ಪಕ್ವವಾಗಿದೆ; ಅತಿಯಾಗಿ ಕಳಿತುದಾಗಿದೆ.ಅದನ್ನು ಈಗ ನೀಡದಿದ್ದರೆ, ಸಮಾಜವು ಸಿಡಿದುಹೋಗುವುದು.ಯಾವುದೇ ನಿರ್ದಿಷ್ಟ ತತ್ವ ಅಥವಾ ಸಿದ್ಧಾಂತಗಳಿಗೆ ಒಳಪಡದೇ ಇರುವ, ಲಾಭರಹಿತವಾದ, ಮತ-ಧರ್ಮಾಧಾರಿತವಲ್ಲದ, ಜನರನ್ನು ಅಂತರ್ಮುಖಿಗಳನ್ನಾಗಿಸುವ ಸರಳವಾದ ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಬೃಹತ್ ಪ್ರಮಾಣದ ಜನರಿಗೆ ತಲುಪಿಸಬೇಕು.ಇದುವರೆಗೆ, ಇಲ್ಲೊಂದಷ್ಟು ಅಲ್ಲೊಂದಷ್ಟು ಜನರನ್ನು ಮಾತ್ರ ತಲುಪಲು ಸಾಧ್ಯವಾಗಿದೆಯೇ ವಿನಃ, ಬೃಹತ್ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ.ಇಂದು, ಆಧುನಿಕ ತಂತ್ರಜ್ಞಾನದ ಸಹಾಯದಿಂದ ನಾವು ಇದನ್ನು ಸಾಧ್ಯವಾಗಿಸಬಹುದು.

  ಇದು ನಮ್ಮ ಈ ತಲೆಮಾರು ಮಾಡಬಹುದಾದ ಅತ್ಯಂತ ಮುಖ್ಯವಾದ ಕೆಲಸವಾಗಿದೆ. ಮನುಷ್ಯ ಪ್ರಜ್ಞೆಯನ್ನು ಬೃಹತ್ ಪ್ರಮಾಣದಲ್ಲಿ ವಿಕಾಸಗೊಳಿಸುವ ಸಾಮರ್ಥ್ಯ ಮತ್ತು ಅವಕಾಶಗಳು ನಮ್ಮದಾಗಿವೆ.

  ನೀವು ಭೌತಿಕ ಅಥವಾ ಬಾಹ್ಯ ತಂತ್ರಜ್ಞಾನವನ್ನು ಇನ್ನಷ್ಟು ಉಪಯೋಗಿಸಿದರೆ, ನಮಗೆ ಭೂಮಿಯೇ ಇಲ್ಲವಾಗುವುದು.ಮನುಷ್ಯ ಶಕ್ತಿಗಳನ್ನು ಅಂತರ್ಮುಖಗೊಳಿಸುವ ತಂತ್ರಜ್ಞಾನವನ್ನು ಬಳಸಿ ಆಂತರ್ಯವನ್ನು ಉತ್ತಮಪಡಿಸುವತ್ತ ಕಾರ್ಯೋನ್ಮುಖರಾದರೆ, ಪರಿಸರಕ್ಕೆ ಹಾನಿಯಾಗದಂತೆ ತಡೆಯಬಹುದು.ಆಂತರ್ಯದಲ್ಲಿ ಅಪಾರವಾದ ಕೆಲಸವಾಗಬೇಕಾಗಿದೆ.ಅತ್ಯಂತ ಉದ್ಯಮಶೀಲ ಸಮಾಜಗಳಿಗೆ ಆಂತರ್ಯದ ಹಾದಿಯನ್ನು ತೋರದಿದ್ದರೆ, ಅವರ ಉದ್ಯಮಶೀಲತೆಯು ಈ ಭೂಮಿಯನ್ನೇ ನಾಶಗೊಳಿಸುತ್ತದೆ.

 • ಸದ್ಗುರು: ಉಸಿರೆಂಬುದು ನಿಮ್ಮನ್ನು ನಿಮ್ಮ ಶರೀರದೊಂದಿಗೆ ಬಂಧಿಸುವ ತಂತಿಯಾಗಿದೆ. ನಿಮ್ಮ ಉಸಿರನ್ನು ನಾನು ತೆಗೆದುಹಾಕಿದರೆ, ನೀವು ಮತ್ತು ನಿಮ್ಮ ಶರೀರ ಬೇರೆ ಬೇರೆಯಾಗುತ್ತವೆ.ಉಸಿರು ನಿಮ್ಮನ್ನು ನಿಮ್ಮ ಶರೀರದೊಂದಿಗೆ ಬಂಧಿಸಿಟ್ಟಿದೆ.ನೀವು “ನನ್ನ ಶರೀರ” ಎಂದು ಯಾವುದನ್ನು ಕರೆಯುತ್ತೀರೋ ಮತ್ತು ನೀವು “ನಾನು” ಎಂದು ಏನನ್ನು ಕರೆಯುತ್ತೀರೋ ಅವರೆಡೂ ಉಸಿರಿನಿಂದ ಬಂಧಿಸಲ್ಟಟ್ಟಿದೆ. ಈ ಉಸಿರು ನೀವು ಈಗ ಏನಾಗಿದ್ದೀರೋ ಅದರ ಅನೇಕ ಆಯಾಮಗಳನ್ನು ನಿರ್ಧರಿಸುತ್ತದೆ.

  ನೀವು ಒಳಗಾಗುವ ವಿವಿಧ ಮಟ್ಟದ ಆಲೋಚನೆ ಮತ್ತು ಭಾವನೆಗಳಿಗೆ ಅನುಸಾರವಾಗಿ ನಿಮ್ಮ ಉಸಿರು ವಿವಿಧ ಸ್ವರೂಪಗಳನ್ನು ಪಡೆಯುತ್ತದೆ.ನೀವು ಕೋಪಗೊಂಡಾಗ, ಒಂದು ರೀತಿಯಲ್ಲಿ ಉಸಿರಾಡುವಿರಿ.ಹಾಗೆಯೇ ಶಾಂತವಾಗಿದ್ದಾಗ ಒಂದು ರೀತಿ,ಸಂತೋಷವಾಗಿದ್ದಾಗ ಒಂದು ರೀತಿ, ದುಃಖದಲ್ಲಿದ್ದಾಗ ಒಂದು ರೀತಿ, ಇದನ್ನು ನೀವು ಗಮನಿಸಿದ್ದೀರಾ?

  ಇದನ್ನು ಆಧರಿಸಿ, ಪ್ರಾಣಾಯಾಮ ಮತ್ತು ಕ್ರಿಯಾ ವಿಜ್ಞಾನವನ್ನು ರೂಪಿಸಲಾಗಿದೆ: ನಿರ್ದಿಷ್ಟ ಕ್ರಮದಲ್ಲಿ ಪ್ರಜ್ಞಾಪೂರ್ವಕವಾಗಿ ಉಸಿರಾಟ ಮಾಡುವುದರಿಂದ, ನಿಮ್ಮ ಜೀವನದ ಬಗೆಗಿನ ಆಲೋಚನೆ, ಭಾವನೆ, ಗ್ರಹಿಕೆ ಮತ್ತು ಅನುಭವಗಳರೀತಿಯನ್ನೇ ಬದಲಾಯಿಸಬಹುದು.

  ಉಸಿರನ್ನು ಒಂದು ಉಪಕರಣದಂತೆ ವಿವಿಧ ರೀತಿಗಳಲ್ಲಿ ಬಳಸಿ ಶರೀರ ಮತ್ತು ಮನಸ್ಸಿನೊಂದಿಗೆ ಹಲವು ಕೆಲಸಗಳನ್ನು ಮಾಡಬಹುದು.ಈಶಕ್ರಿಯೆಯಲ್ಲಿ, ಉಸಿರನ್ನು ಸರಳ ರೀತಿಯಲ್ಲಿ ಬಳಸಿಕೊಂಡು ಕ್ರಿಯೆಯನ್ನು ರೂಪಿಸಲಾಗಿದೆ, ಆದರೆ ಕ್ರಿಯೆ ಎಂಬುದು ಉಸಿರಿನಲ್ಲಿಲ್ಲ.ಉಸಿರು ಒಂದು ಉಪಕರಣ.ಉಸಿರು ಒಂದು ಪ್ರಚೋದಕ ಅಂಶವೇ ವಿನಃ ಪರಿಣಾಮವಲ್ಲ.

  ನೀವು ಹೇಗೆ ಉಸಿರಾಡುವಿರೋ, ಹಾಗೆ ಆಲೋಚಿಸುವಿರಿ. ಹೇಗೆ ಆಲೋಚಿಸುವಿರೋ, ಹಾಗೆ ಉಸಿರಾಡುವಿರಿ. ನಿಮ್ಮ ಇಡೀ ಜೀವನ, ನಿಮ್ಮ ಇಡೀ ಸುಪ್ತಮನಸ್ಸು ನಿಮ್ಮ ಉಸಿರಿನಲ್ಲಿ ಬರೆಯಲ್ಪಟ್ಟಿದೆ.ನೀವು ನಿಮ್ಮ ಉಸಿರನ್ನು ಓದಿದರೆ, ನೀವು ಉಸಿರಾಡುವ ರೀತಿಯಲ್ಲೇ ನಿಮ್ಮ ಭೂತ, ವರ್ತಮಾನ ಮತ್ತು ಭವಿಷ್ಯಕಾಲಗಳು ಬರೆಯಲ್ಪಟ್ಟಿವೆ.

  ಇದನ್ನು ನೀವು ಅರಿತುಕೊಂಡರೆ, ನಿಮ್ಮ ಜೀವನವೇ ಬದಲಾಗಿಹೋಗುತ್ತದೆ.ಇದು ನೀವು ಪ್ರತಿಪಾದಿಸಬಲ್ಲ ವಿಷಯವಲ್ಲ; ಅನುಭವಕ್ಕೆ ತಂದುಕೊಳ್ಳಬೇಕಾದ ಸಂಗತಿಯಾಗಿದೆ.ಒಂದೆಡೆ ಸುಮ್ಮನೆ ಕುಳಿತು ಆನಂದಿಸುವುದನ್ನು ನೀವು ತಿಳಿದುಕೊಂಡರೆ, ಏನನ್ನೂ ಆಲೋಚಿಸದೇ, ಏನನ್ನೂ ಮಾಡದೇ, ಒಂದೆಡೆ ಕುಳಿತುಕೊಂಡು, ನೀವೇ ಜೀವನವೆಂಬುದನ್ನು ತಿಳಿದು ಅನುಭವಿಸುತ್ತಿದ್ದರೆ, ಜೀವನವು ವಿಭಿನ್ನವಾಗಿರುತ್ತದೆ.

  ಒಂದು ರೀತಿಯಲ್ಲಿ ಹೇಳುವುದಾದರೆ, ಇದರರ್ಥವೇನೆಂದರೆ, ಯಾವುದೇ ರೀತಿಯ ಮಾದಕವಸ್ತುವನ್ನು ಸೇವಿಸದೇ ಸುಮ್ಮನೆ ಒಂದೆಡೆ ಕುಳಿತುಕೊಂಡು ಆನಂದದಿಂದ ಮತ್ತರಾಗಬಹುದು, ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆಯೇ ಇದು ಸಾಧ್ಯ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿವೆ. ನೀವು ಒಂದು ರೀತಿಯ ಅರಿವನ್ನು ಹೊಂದಿದರೆ, ಕುಳಿತಲ್ಲೇ ನಿಮ್ಮ ಶರೀರವನ್ನು ಅತ್ಯಂತ ಸುಖದ ಸ್ಥಿತಿಗೆ ತರಬಹುದು. ಒಮ್ಮೆ ಹೀಗೆ ಕುಳಿತು ಉಸಿರಾಡುವುದೇ ಅತ್ಯಂತ ಸುಖದಾಯಕ ಅನುಭವವಾದರೆ, ಸದಾಕಾಲ ನಿಮ್ಮೊಳಗೆ ಇಂತಹ ಸುಂದರ ಸ್ಥಿತಿ ಏರ್ಪಡುವುದರಿಂದ ನೀವು ಅತ್ಯಂತ ನಮ್ಯ, ಹಿತಕರ ಹಾಗೂ ಅದ್ಬುತ ವ್ಯಕ್ತಿಯಾಗಿ ಮಾರ್ಪಡುವಿರಿ.ನಿಮ್ಮ ಮನಸ್ಸು ಮೊದಲಿಗಿಂತ ಚುರುಕಾಗುವುದು.

 • ಸದ್ಗುರು:ನಿಮ್ಮ ತಲೆಯನ್ನು ಸ್ವಲ್ಪ ಮೇಲ್ಮುಖವಾಗಿ ಇರಿಸಿಕೊಳ್ಳುವುದು ಆಕಾಶದಲ್ಲಿ ತೇಲಾಡುತ್ತಿರುವ ಏನೋ ಒಂದನ್ನು ನೋಡುವುದಕ್ಕಲ್ಲ ಅಥವಾ ಕಲ್ಪಿಸಿಕೊಳ್ಳುವುದಕ್ಕಲ್ಲ. ನಿಮ್ಮ ತಲೆಯನ್ನು ಮೇಲ್ಮುಖವಾಗಿರಿಸಿಕೊಳ್ಳುವುದೇಕೆಂದರೆ, ನಿಮ್ಮ ಶರೀರವು ಮೇಲ್ಮುಖವಾಗಿ ನೋಡಿದಾಗ, ಅದರ ಗ್ರಹಣ ಸಾಮರ್ಥ್ಯ ಹೆಚ್ಚುತ್ತದೆ.ಇದು ಕಿಟಕಿಯನ್ನು ತೆರೆದಂತೆ.ಇದು ಅನುಗ್ರಹಕ್ಕೆ ಅನುವಾಗುವ ಕ್ರಿಯೆ.ನೀವು ಇಚ್ಛಿಸಿ ಅನುವಾದಾಗ, ನಿಮ್ಮ ಶರೀರವು ಸಹಜವಾಗಿ ಮೇಲ್ಮುಖವಾಗಿ ಬಾಗುತ್ತದೆ.

 • ಸದ್ಗುರು: ನೀವು “ಆ” ಶಬ್ದವನ್ನು ಉಚ್ಚರಿಸಿದಾಗ, ನಿಮ್ಮ ಶರೀರದ ನಿರ್ವಹಣಾ ಕೇಂದ್ರವು ಸಚೇತನಗೊಳ್ಳುವುದು. ಇದನ್ನು ಮಣಿಪೂರಕ ಚಕ್ರ ಅಥವಾ ನಾಭಿಕೇಂದ್ರ ಎನ್ನುವರು. ಮಣಿಪೂರಕವು ನಿಮ್ಮ ಹೊಕ್ಕುಳಿನಿಂದ ಕಾಲು ಇಂಚು ಕೆಳಭಾಗಕ್ಕೆ ಇರುತ್ತದೆ.ನೀವು ನಿಮ್ಮ ತಾಯಿಯ ಹೊಟ್ಟೆಯಲ್ಲಿದ್ದಾಗ, ನಿಮ್ಮ ಶರೀರದ ನಿರ್ವಹಣಾ ಕೊಳವೆಯು ಅಲ್ಲಿ ಜೋಡಣೆಯಾಗಿರುತ್ತದೆ.ಈಗ, ಕೊಳವೆ ಇಲ್ಲ, ಆದರೆ ನಿರ್ವಹಣಾ ಕೇಂದ್ರ ನಾಭಿಯಲ್ಲಿಯೇ ಇನ್ನೂ ಇದೆ.

  ಭೌತಿಕ ಶರೀರವಿರುವಂತೆಯೇ, ಶಕ್ತಿ ಶರೀರವೆಂಬುದೂ ಒಂದು ಇದೆ.ಪ್ರಾಣ ಅಥವಾ ಶಕ್ತಿ ಎಂದು ಕರೆಯಲ್ಪಡುವ ಈ ಶಕ್ತಿಯು ಶರೀರದಲ್ಲಿ ನಿರ್ದಿಷ್ಟ ಸ್ಥಾಪಿತ ಕ್ರಮದಲ್ಲಿ ಹರಿಯುತ್ತದೆ.ಅದು ಹರಿಯಲು ಸುಮಾರು ೭೨,೦೦೦ ವಿವಿಧ ಮಾರ್ಗಗಳಿವೆ. ಅಂದರೆ, ಶರೀರದಲ್ಲಿರುವ ೭೨೦೦೦ ಮಾರ್ಗಗಳ ಮೂಲಕ ಶಕ್ತಿಯು ಹರಿಯುತ್ತದೆ.ಆದ್ದರಿಂದ, ನಾಡಿಗಳು ಶರೀರದಲ್ಲಿನ ಮಾರ್ಗಗಳು ಅಥವಾ ಕಾಲುವೆಗಳಾಗಿವೆ. ಈ ನಾಡಿಗಳಿಗೆ ಭೌತಿಕ ಅಸ್ತಿತ್ವವಿಲ್ಲ; ಶರೀರವನ್ನು ಬಗೆದು ಹುಡುಕಿದರೆ ಅವು ಕಾಣಸಿಗುವುದಿಲ್ಲ. ಆದರೆ, ನೀವು ಹೆಚ್ಚು ಹೆಚ್ಚು ಅರಿವನ್ನು ಹೊಂದುತ್ತಾ ಹೋದಂತೆ, ಶಕ್ತಿಯು ಅನಿಯಮಿತವಾಗಿ ಹರಿಯದೇ, ನಿರ್ದಿಷ್ಟ ಸ್ಥಾಪಿತ ಮಾರ್ಗಗಳಲ್ಲಿ ಹರಿಯುತ್ತಿರುವುದು ನಿಮ್ಮ ಅರಿವಿಗೆ ಬರುತ್ತದೆ.

  “ಆ” ಶಬ್ದದ ಕಂಪನ ಮಾತ್ರವೇ ಶರೀರದ ಕಣಕಣಕ್ಕೂ ಹರಿಯಬಲ್ಲುದು. ಏಕೆಂದರೆ, ಎಲ್ಲಾ ೭೨೦೦೦ ನಾಡಿಗಳೂ ಕೇವಲ ಮಣಿಪೂರಕದಲ್ಲಿ ಮಾತ್ರ ಸೇರಿ, ಪುನರ್-ಪ್ರಸರಣಗೊಳ್ಳುತ್ತವೆ. ನೀವು “ಆ” ಶಬ್ದವನ್ನು ಉಚ್ಚರಿಸಿದಾಗ, ನಿಮ್ಮ ಹೊಕ್ಕಳಿಗಿಂತ ಕಾಲು ಇಂಚಿನಷ್ಟು ಕೆಳಭಾಗದಿಂದ ಕಂಪನಗಳು ಪ್ರಾರಂಭವಾಗಿ, ಶರೀರದ ಆದ್ಯಂತವಾಗಿ ಹರಡುವುದು ನಿಮ್ಮ ಗಮನಕ್ಕೆ ಬರುತ್ತದೆ.ಈ ಕಂಪನವು ನಿಮ್ಮ ನಿರ್ವಹಣಾ ಕೇಂದ್ರವನ್ನು ಅತ್ಯಂತ ಸಶಕ್ತಗೊಳಿಸಲು ನೆರವಾಗುತ್ತದೆ.ಈ ಕೇಂದ್ರವನ್ನು ಸಚೇತನಗೊಳಿಸುವುದರಿಂದ ಆರೋಗ್ಯ, ದಕ್ಷತೆ, ಸಂಮೃದ್ಧಿ ಮತ್ತು ಆನಂದವುಂಟಾಗುತ್ತದೆ.

 • ಖಾಲಿಹೊಟ್ಟೆಯ ಅಗತ್ಯವಿಲ್ಲ. ಸಮಯದ ಅಂತರವೂ ಬೇಕಿಲ್ಲ. ಹೊಟ್ಟೆ ತುಂಬ ಊಟ ಮಾಡಿದ್ದರೆ ನಿಮಗೆ ನಿದ್ರೆ ಬರಬಹುದು ಅಷ್ಟೇ.

 • ನಿಮ್ಮ ಇತರ ದಿನಚರಿ ಕಾರ್ಯಗಳಂತೆಯೇ ಈಶ ಕ್ರಿಯ ಕೂಡ ನಿಮ್ಮ ಜೀವನದ ಭಾಗವಾಗಬೇಕು. ದಿನವೂ ಹಲ್ಲುಜ್ಜುವಂತೆ - ನೀವು ಸಣ್ಣವರಾಗಿದ್ದಾಗ ಬೇರೆಯವರು ಒತ್ತಾಯಿಸಿ ಕಲಿಸಿದರು. ಆದರೆ ಅದರ ಪ್ರಯೋಜನವನ್ನು ತಿಳಿದಮೇಲೆ ಅದನ್ನು ಯೋಚಿಸದೆಯೇ ನೀವಾಗಿಯೇ ಮಾಡಿತ್ತೀರಿ. ಹಾಗೆಯೇ ಧ್ಯಾನ ಕೂಡ. ಒಂದುಸಾರಿ ಧ್ಯಾನದ ಮಹತ್ವ ತಿಳಿದರೆ ಹೆಚ್ಚು ಪರಿಶ್ರಮವಿಲ್ಲದೆಯೇ ಅದು ನಿಮ್ಮ ದಿನದ ಭಾಗವಾಗುವುದು. ಹೀಗಾಗಲು ಶುರುವಿನಲ್ಲಿ ಸತತವಾಗಿ ಅಭ್ಯಾಸ ಮಾಡಬೇಕು. ಈ ಕಾರಣಕ್ಕಾಗಿಯೇ ಇದರ ಅಭ್ಯಾಸ ಮೊದಲ ೪೮ ದಿನಗಳವರೆಗೆ ಎರಡು ಬಾರಿ ಮಾಡಬೇಕು.

 • ನೀವು ಎರಡನ್ನೂ ದಿನವೂ ಮಾಡಲು ಸಾಧ್ಯವಾದರೆ ಉತ್ತಮ. ಅದರಿಂದ ಲಾಭವಾಗುವುದು ನಿಶ್ಚಿತ. ನಿಮಗೆ ಸಮಯದ ಅಭಾವ ಬಂದರೆ ಶಾಂಭವೀ ಮಹಾಮುದ್ರಾಗೆ ಆದ್ಯತೆ ಕೊಡುವುದು ಒಳ್ಳೆಯದು.

 • ಬೇಕೆನಿಸಿದರೆ ನೀವು ಈಶ ಕ್ರಿಯ ಹಲವು ಸಲ ಹೆಚ್ಚಿಗೆ ಮಾಡಬಹುದು. ಆದರೆ ಮಂತ್ರವನ್ನು ದೀರ್ಘವಾಗಿ ಉಚ್ಚರಿಸಬೇಕೆನಿಸಿದರೆ ’ಆಮ್’[ಓಂ] ಉಚ್ಚಾರಣೆ ಹೆಚ್ಚು ಸಮಂಜಸ. ನೀವು ಯೋಗ ಕೇಂದ್ರಕ್ಕೆ ಬಂದರೆ ಅಲ್ಲಿ ಪ್ರತಿದಿನ ಮಧ್ಯಾಹ್ನ 12.15 ರಿಂದ 1.30 ರವರೆಗೆ ನಡೆಸುವ ಓಂಕಾರದಲ್ಲಿ ಭಾಗವಹಿಸಬಹುದು. ಅಥವ, ನೀವಿರುವಲ್ಲಿನ ಈಶ ಕೇಂದ್ರದಲ್ಲಿ ನಡೆಸುವ ಈಶ ಯೋಗ ಇಲ್ಲವೆ ಇನ್ನರ್ ಎಂಜಿನೀರಿಂಗ್ ಕಾರ್ಯಕ್ರಮದಲ್ಲಿ ಕಲಿಯಬಹುದು. ಮುಂದಿನ ದಿನಗಳಲ್ಲಿ ನಡೆಸುವ ಕಾರ್ಯಕ್ರಮಗಳ ಮಾಹಿತಿಗೆ, ವೆಬ್ ಸೈಟ್ ಅನ್ನು ನೋಡಿ.

  www.ishayoga.org

 • ಸ್ಪಾಂಡಿಲೈಟಿಸ್ ಇದ್ದರೂ ಈಶ ಕ್ರಿಯ ಮಾಡಲು ಯಾವ ತೊಂದರೆಯೂ ಇಲ್ಲ. ಈ ಕ್ರಿಯ ಬಹಳ ಸುರಕ್ಷಿತ ಹಾಗೂ ಪ್ರಯೋಜನಕಾರಿ. ಕೆಳಗೆ ಕೂರಲಾಗದಿದ್ದರೆ ಕುರ್ಚಿಯಲ್ಲಿ ಕುಳಿತೇ ಮಾಡಬಹುದು. ಮೊಣಕಾಲಿನ ಬಳಿ ಕಾಲುಗಳನ್ನು ಅಡ್ಡಲಾಗಿಸಬೇಕಷ್ಟೆ. ಇನ್ನಾವುದೇ ದೀರ್ಘಕಾಲದ ಕಾಯಿಲೆಯಿದ್ದರೂ ಈಶ ಕ್ರಿಯ ಮಾಡಲು ತೊಂದರೆಯಿಲ್ಲ. ಕ್ರಿಯ ಮಾಡುವವರೆಗೆ ಸ್ಥಿರವಾಗಿ ಸುಖಾಸನದಲ್ಲಿ ಕೂರಲು ಸಾಧ್ಯವಾದರೆ ಸಾಕು.

 • ಅವರು ವಿಡಿಯೋ ನೋಡಿಯೇ ಕಲಿಯುವುದು ಉತ್ತಮ.

 • ನೀವು ಬಾಯಿಯನ್ನು ಸಂಪೂರ್ಣವಾಗಿ ತೆರೆದಿರುವಂತೆ ನೋಡಿಕೊಳ್ಳಿ. ತೆರೆದ ಬಾಯಿಯಲ್ಲಿನ ’ಆ’ ಧ್ವನಿಯಿಂದ ಮಣಿಪೂರಕದಲ್ಲಿ ಕಂಪನ ನಿಶ್ಚಯವಾಗಿ ತಿಳಿಯುವುದು. ಬಹುಶಃ ನೀವು ಅರಿವಿಲ್ಲದೆ ಬಾಯನ್ನು ಅರ್ಧ ತೆರೆದಿರುತ್ತೀರಿ. ಪೂರ್ಣವಾಗಿ ಬಾಯಿತೆರೆದು ನೋಡಿದರೆ ವ್ಯತ್ಯಾಸ ಗೊತ್ತಾಗಬಹುದು.

 • ಕುರ್ಚಿಯಲ್ಲಿ ಕುಳಿತೇ ಧ್ಯಾನ ಮಾಡಬಹುದು. ನಿಮ್ಮ ಕಾಲುಗಳನ್ನು ಮೊಣಕಾಲ ಭಾಗದಲ್ಲಿ, ಒಂದರ ಮೇಲೆ ಇನ್ನೊಂದು ಬರುವಂತೆ ಹಾಕಿ ಕುಳಿತುಕೊಳ್ಳಿ.

 • ನೀವು ಧ್ಯಾನವನ್ನು ಎಲ್ಲಿಬೇಕಾದರೂ ಮಾಡಬಹುದು. ಕ್ರಿಯ ಮಾಡುವವರೆಗೆ ದೈಹಿಕವಾದ ಯಾವ ಅಡಚಣೆಯೂ ಬಾರದಂತೆ ನೋಡಿಕೊಳ್ಳಿ. ಶಾಂತವಾದ ಸ್ಥಳ ಒಳ್ಳೆಯದು. ಆದರೆ ಬೇಕೇಬೇಕೆಂದೇನಿಲ್ಲ. ಶಾಂತ ಸ್ಥಳ ಸಿಗದಿದ್ದರೆ ನೀವಿರುವಲ್ಲೇ ಧ್ಯಾನ ಮಾಡಿ. ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಕ್ರಿಯೆಯನ್ನು ಮಧ್ಯೆ ತುಂಡರಿಸಬೇಡಿ. ಇದರಿಂದ ಧ್ಯಾನದ ಸಮಯದಲ್ಲಿ ನಿಮ್ಮ ಶಕ್ತಿವಲಯದಲ್ಲಿ ಆಗುತ್ತಿರುವ ಪುನರ್ವ್ಯವಸ್ಥೆಗೆ ಧಕ್ಕೆಯಾಗುವುದು.

 • ನಿಮಗೆ ಕಲಿಸಿದ ಎಲ್ಲ ಸೂಚನೆಗಳು ನೆನಪಿನಲ್ಲಿದ್ದರೆ ಖಂಡಿತವಾಗಿ ಕಲಿತಿರುವುದನ್ನೇ ಮುಂದುವರಿಸಬಹುದು. ಸೂಚನೆಗಳು ಮರೆತು ಹೋಗಿದ್ದರೆ ಕ್ರಿಯೆಯನ್ನು ಆನ್‌ಲೈನ್ ಅಥವ ಡಿವಿಡಿಯಿಂದ ಪುನಃ ಕಲಿತು ಮಾಡುವುದು ಉತ್ತಮ.

 • ನಿಮಗೆ ಅನುಕೂಲವಾದ ಯಾವ ಸಮಯದಲ್ಲಾದರೂ ಮಾಡಬಹುದು. ಆದರೆ ನಡುರಾತ್ರಿಯ ವೇಳೆ ಮಾಡದಿರುವುದು ಒಳ್ಳೆಯದು.

 • ದಿನದಲ್ಲಿ ಎರಡು ಬಾರಿ- ಬೆಳಗ್ಗೆ ಮತ್ತು ಸಂಜೆ ಮಾಡುವುದು ಒಳ್ಳೆಯದು. ಸಮಯ ಸಿಕ್ಕರೆ, ಸಾಧ್ಯವಾದಾಗ ಇನ್ನೂ ಹಲವುಸಲ ಮಾಡಬಹುದು.

 • ಸಾಮಾನ್ಯವಾಗಿ ನಲವತ್ತೆಂಟು ದಿನಗಳ ಅವಧಿಗೆ ಒಂದು ’ಮಂಡಲ’ ಎಂದು ಪರಿಗಣಿಸುವರು. ಈ ಅವಧಿಯಲ್ಲಿ ದೇಹದ ವ್ಯವಸ್ಥೆ ಒಂದು ಆವೃತ್ತ(Cycle) ಬರುವುದು. ಈ ಕಾರಣಕ್ಕಾಗಿಯೇ ಆಯುರ್ವೇದದ ಔಷಧಿಯನ್ನು 48 ದಿನಗಳಿಗೆ ಕೊಡುವರು. ಔಷಧಿಯು ದೇಹದಲ್ಲಿ ಪರಿಣಾಮ ಬೀರಲು ಇಷ್ಟು ಸಮಯ ಹಿಡಿಸುವುದು. ಅಂತೆಯೇ ಈಶ ಕ್ರಿಯ ಕೂಡ. ಅದಕ್ಕಾಗಿಯೇ 48 ದಿನಗಳವರೆಗೆ ಬಿಡದೆ ಈ ಕ್ರಿಯ ಮಾಡುವುದು ಬಹುಮುಖ್ಯ.

 
 
ISHA FOUNDATION
Isha Foundation - © 1997 - 2022 Isha Foundation. All Rights Reserved.
Site MapFeedbackContact UsInternational Yoga DayGuru Purnima 2019 View our Privacy Policy